ವ್ಹಾಟ್ರ್ನ್, ಎಡಿತ್
	1862-1937. ಅಮೆರಿಕದ ಪ್ರಸಿದ್ಧ ಕಾದಂಬರಿ ಕಾರ್ತಿ ಹಾಗೂ ಕಥೆಗಾರ್ತಿ. 1862ರಲ್ಲಿ ಅಮೆರಿಕದ ನ್ಯೂಯಾರ್ಕ್‍ನಲ್ಲಿ ಜನಿಸಿದಳು. ಅತ್ಯಂತ ಪ್ರತಿಷ್ಠಿತ ಹಾಗೂ ಶ್ರೀಮಂತ ಕುಟುಂಬ ಇವಳದು. ನ್ಯೂ ಬೋಲ್ಡ್ ಜೋನ್ಸ್ ಎಂಬುದು ಇವಳ ಹಾಗೂ ಇವಳ ಕುಟುಂಬದ ಹೆಸರು. 1885ರಲ್ಲಿ ಎಡ್ವರ್ಡ್ ವ್ಹಾಟ್ರ್ನ್‍ನನ್ನು ಮದುವೆಯಾಗಿ 1913ರಲ್ಲಿ ವಿವಾಹ ವಿಚ್ಛೇದನ ಪಡೆದಳು. ಅನಂತರ ಫ್ರಾನ್ಸಿಗೆ ಪ್ರಯಾಣ ಬೆಳೆಸಿದಳು. ಈಕೆ ಯುರೋಪಿನಲ್ಲಿದ್ದಾಗ ಬಹಳ ಶಿಸ್ತಿನ ಜೀವನ ನಡೆಸುತ್ತಿದ್ದಳು. ಇವಳ ಸಾಹಿತ್ಯಕೃಷಿ ಆರಂಭಗೊಂಡದ್ದು ಕವನ ಹಾಗೂ ಸಣ್ಣಕಥೆಗಳ ಬರೆವಣಿಗೆಗಳಿಂದ.

	ಸಮಾಜದಲ್ಲಿ ಮಧ್ಯಮ ಹಾಗೂ ಉನ್ನತ ವರ್ಗಗಳ ಜನರ ಬದಲಾದ ನೈತಿಕ ಹಾಗೂ ಸಾಮಾಜಿಕ ಮೌಲ್ಯಗಳನ್ನು ತನ್ನ ಕಾದಂಬರಿಯ ಪಾತ್ರಗಳೊಂದಿಗೆ ಮುಖಾಮುಖಿಯಾಗಿಸಿ ಅದನ್ನು ಮನೋವಿಶ್ಲೇಷಣಾತ್ಮಕ ರೀತಿಯಿಂದ ಪರೀಕ್ಷಿಸುವ ಅತ್ಯುತ್ತಮ ವಿಧಾನದಿಂದ ಈಕೆ ಹೆಚ್ಚು ಪ್ರಸಿದ್ಧಿ ಪಡೆದಳು. ಇವಳ ಕಾದಂಬರಿ ಹಾಗೂ ಕಥೆಗಳಲ್ಲಿ ಇಂತಹ ಹಲವಾರು ವಿಶಿಷ್ಟ ಬಗೆಯ ಸಂಕೀರ್ಣ ಸ್ತ್ರೀ, ಪುರುಷ ಪಾತ್ರಗಳನ್ನು ಕಾಣಬಹುದು. ಹಲವಾರು ಪ್ರಸಿದ್ಧ ಬರೆಹಗಾರರೊಂದಿಗೆ ಬಹಳ ಸ್ನೇಹದಿಂದ ಇರುತ್ತಿದ್ದ ಇವಳ ಕಾದಂಬರಿಗಳ ಮೇಲೆ ಪ್ರಸಿದ್ಧ ಕಾದಂಬರಿಕಾರ ಹೆನ್ರಿ ಜೇಮ್ಸ್‍ನ ಪ್ರಭಾವವನ್ನು ಗುರುತಿಸಬಹುದು. ದ ಗ್ರೇಟರ್ ಇನ್‍ಕ್ಲಿನೇಷನ್ (1899), ದ ಟಚ್‍ಸ್ಟೋನ್, ದ ಹೌಸ್ ಆ¥sóï ಮಿರ್ತ್ (1905), ಈಥನ್ ಫ್ರೋಮ್ (1911), ದ ರೀ¥sóï (1912), ದ ಕಸ್ಟಮ್ ಆಫ್ ದ ಕಂಟ್ರಿ (1913), ಸಮ್ಮರ್ (1917), ಓಲ್ಡ್ ನ್ಯೂಯಾರ್ಕ್ (1924), ದ ಮದರ್ಸ್ ರಿಕಂಪೆನ್ಸ್ (1925)-ಇವು ಇವಳ ಕೆಲವು ಪ್ರಸಿದ್ಧ ಕಾದಂಬರಿಗಳು. ಇದಲ್ಲದೆ ದ ಡೀಸೆಂಟ್ ಆ¥sóï ಮ್ಯಾನ್ (1904), ಟೇಲ್ಸ್ ಆ¥sóï ಮೆನ್ ಅಂಡ್ ಘೋಸ್ಟ್ಸ್ (1910) ಮೊದಲಾದ ಸುಮಾರು 85ಕ್ಕೂ ಹೆಚ್ಚು ಸಣ್ಣಕಥೆಗಳನ್ನು ಬರೆದಿದ್ದಾಳೆ. ಇವಳ ಬಹುತೇಕ ಕಾದಂಬರಿಗಳು 1800ರ ಮತ್ತು 1900ರ ಅವಧಿಯ ಆರಂಭದ ನ್ಯೂಯಾರ್ಕ್ ಸಮಾಜದ ವಿದ್ಯಮಾನಗಳನ್ನು ವಸ್ತುವಾಗಿ ಹೊಂದಿವೆ. ಇವಳ ದ ಏಜ್ ಆ¥sóï ಇನ್ನೋಸೆನ್ಸ್ (1920) ಕಾದಂಬರಿಗೆ 1921ರಲ್ಲಿ ಪುಲಿಟ್ಜರ್ ಪ್ರಶಸ್ತಿ ಲಭ್ಯವಾಯಿತು. ಎ ಬ್ಯಾಕ್‍ವರ್ಡ್‍ಗ್ಲಾನ್ಸ್ (1934) ಎಂಬುದು ಇವಳ ಆತ್ಮಚರಿತ್ರೆ. ಇವಳು ದ ರೈಟಿಂಗ್ ಆಫ್ ಫಿûಕ್ಷನ್ (1925) ಎಂಬ ವಿಮರ್ಶನ ಕೃತಿಯನ್ನೂ ಬರೆದಿದ್ದಾಳೆ.										
 (ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ